ವೆಸ್ಟ್ ವರ್ಜೀನಿಯ
ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯ. ಅಮೆರಿಕದ ಪೂರ್ವ ಭಾಗದಲ್ಲಿರುವ ಈ ರಾಜ್ಯದ  ವಿಸ್ತೀರ್ಣ 62,759 ಚ.ಕಿಮೀಗಳು. ರಾಜಧಾನಿ ಚಾರ್ಲ್‍ಸ್ಟನ್. ಜನಸಂಖ್ಯೆ 18,01,625 (1990). ಅಮೆರಿಕದ ಅಂತರ್ಯುದ್ಧದ ಅನಂತರ 1863ರಲ್ಲಿ ವರ್ಜೀನಿಯದಿಂದ ಬೇರ್ಪಟ್ಟ ಪರ್ವತ ರಾಜ್ಯ. ವೆಸ್ಟ್ ವರ್ಜೀನಿಯ ರಾಜ್ಯದ ಗಡಿ ಪ್ರದೇಶ ಸ್ವಾಭಾವಿಕ ಎಲ್ಲೆಗಳಿಂದ ರೂಪುಗೊಂಡಿಲ್ಲ. ಓಹಿಯೋ ನದಿಯು ಈ ರಾಜ್ಯದ ವಾಯವ್ಯಗಡಿ ರೇಖೆಯಾಗಿ ಹರಿಯುತ್ತದೆ. ಪೊಟೊಮಾಕ್ ನದಿ ವೆಸ್ಟ್ ವರ್ಜೀನಿಯ ಅಲ್‍ಜೆನಿ ಪರ್ವತದ ಪೂರ್ವ ಭಾಗದಿಂದ ದಕ್ಷಿಣದ ಕಡೆಗೆ ಹರಿಯುತ್ತದೆ. ವೆಸ್ಟ್ ವರ್ಜೀನಿಯ 78ಲಿ20† ಪ.ರೇ. ದಿಂದ 82ಲಿ35† ಪ.ರೇ.ದವರೆಗೂ 37ಲಿ50† ಉ.ಅ.ದಿಂದ 40ಲಿ50† ಉ.ಅ.ದವರೆಗೂ ಹಬ್ಬಿದೆ.

	ವೆಸ್ಟ್ ವರ್ಜೀನಿಯದ ಸರಾಸರಿ ಭೂ ಪ್ರದೇಶದ ಎತ್ತರ ಸಮುದ್ರಮಟ್ಟದಿಂದ 1500ಅಡಿ. ಮಿಸಿಸಿಪಿ ನದಿಯ ಪೂರ್ವ ಭಾಗದಲ್ಲಿ ಬರುವ ಎಲ್ಲಾ ರಾಜ್ಯಗಳಿಗಿಂತ ಇದು ಹೆಚ್ಚಿನ ಎತ್ತರವನ್ನು ಹೊಂದಿದೆ. ಅಪ್‍ಲೇಷಿಯನ್ ಪರ್ವತಶ್ರೇಣಿ ಈ ರಾಜ್ಯದ ಈಶಾನ್ಯ ಭಾಗ ಮತ್ತು ಆಗ್ನೇಯ ಭಾಗದಲ್ಲಿ ದಕ್ಷಿಣೋತ್ತರವಾಗಿ ಹರಡಿದೆ. ವಿಸ್ತಾರ ಕಣಿವೆ ಪ್ರದೇಶ ಓಹಿಯೋನದಿ ಪ್ರದೇಶದಲ್ಲಿ ಕಂಡುಬಂದರೆ, ಕಿರಿದಾದ ಕಣಿವೆ ಇಳಿಜಾರು ಪ್ರದೇಶ ಅಲ್‍ಜೆನಿ ಮತ್ತು ಬ್ಲೂ ಪರ್ವತ ಶ್ರೇಣಿಗಳ ನಡುವೆ ಕಂಡುಬರುತ್ತದೆ. ಕಣಿವೆಗಳು ಕಡಿದಾಗಿ ಇಳಿಜಾರಿನಿಂದ ಕೂಡಿವೆ. ಇಲ್ಲಿ ಯಾವುದೇ ವಿಶಾಲವಾದ ಮೈದಾನ ಪ್ರದೇಶ ಕಂಡುಬರುವುದಿಲ್ಲ. ಆದರೆ ಪರ್ವತಗಳ ರಚನೆಯನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ 1. ಅಪ್‍ಲೇಷಿಯನ್ ಪರ್ವತ ಶ್ರೇಣಿ ಮತ್ತು ಕಣಿವೆ; 2. ಅಪ್‍ಲೇಷಿಯನ್ ಪ್ರಸ್ಥಭೂಮಿ; 3. ಬ್ಲೂ ಪರ್ವತ ಶ್ರೇಣಿ. ಈ ರಾಜ್ಯದ ಸ್ಪ್ರೂಸ್ ನಾಬ್ ಎಂಬ ಶಿಖರ 1482 ಮೀ. ಎತ್ತರವಿದೆ.

	ವೆಸ್ಟ್ ವರ್ಜೀನಿಯ ಪ್ರದೇಶದಲ್ಲಿ ನಾಲ್ಕು ವಿಧದ ಋತುಮಾನಗಳು ಕಂಡುಬರುತ್ತವೆ. ನದಿ ಕಣಿವೆ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಅಧಿಕ ಉಷ್ಣಾಂಶ ಕಂಡುಬರುತ್ತದೆ. ಜುಲೈನಲ್ಲಿ ಈ ಪ್ರದೇಶದ ಉತ್ತರ ಭಾಗದಲ್ಲಿ 76ಲಿ ಫ್ಯಾ. ಉಷ್ಣಾಂಶವಿದ್ದರೆ, ದಕ್ಷಿಣದಲ್ಲಿ ಉಷ್ಣಾಂಶದ ಪ್ರಮಾಣವು 72ಲಿ ಫ್ಯಾ.ಗಳಷ್ಟಿರುವುದು. ಅಧಿಕ ಉಷ್ಣಾಂಶ 90ಲಿಫ್ಯಾ.ಗಳಷ್ಟಿರುವುದು. ಚಳಿಗಾಲ ಹಿತಕರವಾಗಿರುವುದು. ಆದರೆ ಪರ್ವತ ಪ್ರದೇಶಗಳಲ್ಲಿ ಕಡಿಮೆ ಉಷ್ಣಾಂಶದಿಂದಾಗಿ ಹಿಮ ಬೀಳುವುದು. ಈ ಪ್ರದೇಶದ ವಾರ್ಷಿಕ ಮಳೆಯ ಸರಾಸರಿ ಪ್ರಮಾಣ 106 ಸೆಂ.ಮೀ.ಗಳು. ಪರ್ವತ ಪ್ರದೇಶಗಳಲ್ಲಿ ಅಧಿಕ ಮಳೆ  ಕಂಡುಬರುತ್ತದೆ. 

	ನದಿ-ಸರೋವರಗಳು: ವೆಸ್ಟ್ ವರ್ಜೀನಿಯದ ನದಿಗಳು ಹೆಚ್ಚಾಗಿ ಪರ್ವತ ಶ್ರೇಣಿ ಮತ್ತು ಕಣಿವೆ ಪ್ರದೇಶಗಳ ಮೂಲಕ ವೇಗವಾಗಿ ಹರಿಯುತ್ತವೆ. ಇದರ ಪರಿಣಾಮವಾಗಿ ಓಹಿಯೋ ಮತ್ತು ಪೊಟೋಮಾಕ್ ನದಿ ಪ್ರದೇಶಗಳಲ್ಲಿ ಸಣ್ಣ ಜಲಪಾತಗಳು ಕೊರೆದ ಆಳವಾದ ಕಣಿವೆಗಳು ನಿರ್ಮಾಣಗೊಂಡಿವೆ. ಓಹಿಯೊ ನದಿ ಮಿಸಿಸಿಪಿ ನದಿಯ ಉಪನದಿಯಾಗಿದೆ. ಓಹಿಯೋ ನದಿಯ ಉಪನದಿಗಳೆಂದರೆ ಕಣ್ವಾನದಿ ಓಹಿಯೋ ನದಿಯ ದೊಡ್ಡ ಉಪನದಿಯಾಗಿದೆ. ಇವು ಉತ್ತರದ ಅಪ್‍ಲೇಷಿಯನ್ ಪರ್ವತ ಪ್ರದೇಶದಲ್ಲಿ ಉಗಮ ಹೊಂದುತ್ತವೆ. ಕೃತಕವಾಗಿ ನಿರ್ಮಿಸಿದ ಸರೋವರಗಳನ್ನು ಮೀನುಗಾರಿಕೆ ಮತ್ತು ಮನರಂಜನೆಗೆ ಬಳಸಲಾಗುತ್ತದೆ.

	ಸ್ವಾಭಾವಿಕ ಸಂಪನ್ಮೂಲಗಳು: ಈ ರಾಜ್ಯದ ಕೆಲವು ಭಾಗಗಳಲ್ಲಿ ಅನೇಕ ಪ್ರಮುಖ ಸಂಪನ್ಮೂಲಗಳು ದೊರೆಯುತ್ತವೆ. ಅಧಿಕ ಪ್ರಮಾಣದ ಖನಿಜ ಸಂಪನ್ಮೂಲಗಳು, ಶಕ್ತಿಸಂಪನ್ಮೂಲ, ವಿಸ್ತಾರವಾದ ಪ್ರದೇಶದ ಅರಣ್ಯ ಸಂಪತ್ತು ಮತ್ತು ಪ್ರಾಣಿಸಂಪತ್ತು ಇವೆ. ಜೊತೆಯಲ್ಲಿ ಮಾನವ ಸಂಪನ್ಮೂಲ ಇಲ್ಲಿ ಅಧಿಕವಾಗಿದೆ.

	ಈ ಪ್ರದೇಶದಲ್ಲಿ ಕಪ್ಪುಮಣ್ಣು ಮತ್ತು ಫಲವತ್ತಾದ ಮೆಕ್ಕಲು ಮಣ್ಣಿನ ನದಿ ಕಣಿವೆಗಳು ಕಂಡುಬರುತ್ತವೆ. ಕೆಲವು ಭಾಗಗಳಲ್ಲಿ ಸುಣ್ಣ ಮಿಶ್ರಿತ ಮರಳು ಮಣ್ಣು ಕಂಡುಬರುತ್ತದೆ. ಇದು ಧಾನ್ಯಗಳ ಉತ್ಪಾದನೆಗೆ ಮತ್ತು ಹಣ್ಣುಗಳ ಮರಗಳಿಗೆ ಹೆಚ್ಚು ಉಪಯುಕ್ತವಾಗಿದೆ.

	ಇಲ್ಲಿ ಹೆಚ್ಚು ಮೌಲ್ಯಯುಕ್ತ ಉತ್ತಮ ಗುಣಮಟ್ಟದ ಖನಿಜನಿಕ್ಷೇಪಗಳು ಕೇಂದ್ರಿತವಾಗಿವೆ. ಅಧಿಕ ಕಲ್ಲಿದ್ದಲು ನಿಕ್ಷೇಪಗಳು ಇಲ್ಲಿ ಕಂಡುಬರುತ್ತಿದ್ದು ಈ ರಾಜ್ಯವನ್ನು ಪ್ರಪಂಚದ ಕಲ್ಲಿದ್ದಲಿನ ಬುಟ್ಟಿ ಎಂದು ಕರೆಯಲಾಗಿದೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಅರ್ಧದಷ್ಟು ಪ್ರದೇಶಗಳಲ್ಲಿ ಸ್ವಾಭಾವಿಕ ಅನಿಲ, ಸಮೃದ್ಧ ಪೆಟ್ರೋಲಿಯಂ ನಿಕ್ಷೇಪ, ಉಪ್ಪು, ಕಲ್ಲುಪ್ಪು, ಸುಣ್ಣಕಲ್ಲು, ಮರಳು, ಜೇಡಿಮಣ್ಣು, ಮೃದುಶಿಲೆಗಳು ಕಂಡುಬರುತ್ತವೆ.

	1999ರ ಅಂಕಿ ಅಂಶದ ಪ್ರಕಾರ ರಾಜ್ಯ ಅರಣ್ಯ ಪ್ರದೇಶ 79,385 ಎಕರೆ. ಇಲ್ಲಿನ ರಾಷ್ಟ್ರೀಯ ಅರಣ್ಯ ಪ್ರದೇಶ 10,32,000 ಎಕರೆ. ಇಲ್ಲಿ ಬೆಳೆಯುವ ಪ್ರಮುಖ ಮರಗಳೆಂದರೆ ಬಾಸ್‍ವುಡ್, ಬೀಚ್, ಬರ್ಚ್, ಚೆರ್ರಿ, ಮಾಫೆಲ್, ಕೆಂಪು ಮತ್ತು ಬಿಳಿಯ ಓಕ್, ಹಳದಿಬಣ್ಣದ ಪಾಪ್ಲರ್ ಮರಗಳು. ನಿತ್ಯ ಹರಿದ್ವರ್ಣದ ಕಾಡುಗಳು ಹಾಗೂ ಪರ್ವತ ಪ್ರದೇಶಗಳಲ್ಲಿ ಕಂಡುಬರುತ್ತವೆ.

	ಇಲ್ಲಿನ ಅರಣ್ಯಗಳಲ್ಲಿ ಬೂದಿಬಣ್ಣ ಮತ್ತು ಕೆಂಪು ಬಣ್ಣದ ನರಿಗಳು, ಮಂಗಗಳು, ಮೊಲ, ಅಳಿಲು, ಜಿಂಕೆಗಳು, ಕರಡಿ ಮೊದಲಾದ ಪ್ರಾಣಿಗಳು ಕಂಡುಬರುತ್ತವೆ. ಸಾಕು ಪ್ರಾಣಿಗಳೆಂದರೆ ಹಸು, ಕುರಿ, ಹಂದಿ, ಕೋಳಿ.

	ಆರ್ಥಿಕತೆ: ವೆಸ್ಟ್ ವರ್ಜೀನಿಯ ರಾಜ್ಯದಲ್ಲಿ 1999ರಲ್ಲಿ 20,500 ರಷ್ಟು ಕೃಷಿ ಕ್ಷೇತ್ರವಿದ್ದು, ಇದು 3.6ಮಿಲಿಯನ್ ಎಕರೆ ಪ್ರದೇಶವನ್ನು ಹೊಂದಿದೆ. ಇಲ್ಲಿನ ಸರಾಸರಿ ಕೃಷಿ ಭೂಹಿಡುವಳಿಯ ಪ್ರಮಾಣ 176 ಎಕರೆಗಳು. ಇಲ್ಲಿನ ಪ್ರಮುಖ ವ್ಯವಸಾಯೋತ್ಪನ್ನಗಳೆಂದರೆ ಜಾನುವಾರು ಸಾಕಾಣಿಕೆ, ಡೈರಿ ಉತ್ಪನ್ನಗಳು, ಹಣ್ಣು ಮತ್ತು ತರಕಾರಿಗಳು, ಮುಸುಕಿನ ಜೋಳ, ಬಾರ್ಲಿ, ಓಟ್ಸ್, ಆಲೂಗೆಡ್ಡೆ, ರೈ, ಸೋಯಾಅವರೆ, ಗೋದಿ, ಕಾಳುಗಳು ಮತ್ತು ಹೊಗೆಸೊಪ್ಪು. ಮೀನುಗಾರಿಕೆಗೆ ಈ ರಾಜ್ಯ ಪ್ರಸಿದ್ಧ.

	ವೆಸ್ಟ್ ವರ್ಜೀನಿಯ ಗಣಿಗಾರಿಕೆಯಲ್ಲಿ 5ನೆಯ ಸ್ಥಾನ ಪಡೆದ ರಾಜ್ಯ. ಕಲ್ಲಿದ್ದಲು ಇಲ್ಲಿನ ಗಣಿಗಾರಿಕೆಯ ಪ್ರಮುಖ ವಸ್ತು. ಇತರ ಗಣಿಗಾರಿಕೆಗಳೆಂದರೆ ಸ್ವಾಭಾವಿಕ ಅನಿಲ, ಪೆಟ್ರೋಲಿಯಂ, ಬೆಲೆ ಬಾಳುವ ಕಲ್ಲು ಮತ್ತು ಸುಣ್ಣಕಲ್ಲು.ರಾಸಾಯನಿಕ ಕೈಗಾರಿಕೆ, ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ, ಗಾಜು, ಪಿಂಗಾಣಿ ಸಾಮಾನು ಕೈಗಾರಿಕೆ, ಲೋಹ, ಬಟ್ಟೆ ಮತ್ತು ವಿದ್ಯುತ್ ಕೈಗಾರಿಕೆಗಳು, ವೈದ್ಯಕೀಯ ಮತ್ತು ಅದಕ್ಕೆ ಬೇಕಾದ ತಂತ್ರಜ್ಞಾನ ಕೈಗಾರಿಕೆಗಳು ಇಲ್ಲಿನ ಪ್ರಮುಖ ಕೈಗಾರಿಕೆಗಳಾಗಿವೆ. ಈ ಕೈಗಾರಿಕೆಗಳು ಈ ರಾಜ್ಯದ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕೇಂದ್ರೀಕರಿಸಿವೆ. ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಕೆಲವು ಕೈಗಾರಿಕೆಗಳು ಕೇಂದ್ರೀಕೃತವಾಗಿವೆ. ಚಾರ್ಲ್‍ಸ್ಟನ್, ಹಂಟಿಂಗ್‍ಟನ್, ವ್ಹೀಲಿಂಗ್, ಪಾರ್ಕರ್ಸ್‍ಬರ್ಗ್, ಮೊರ್ಗಾನ್‍ಟೌನ್ ಮತ್ತು ವ್ಹೀರ್‍ಟನ್‍ಗಳು ಪ್ರಮುಖ ನಗರ ಪಟ್ಟಣಗಳಾಗಿವೆ.

	ವೆಸ್ಟ್ ವರ್ಜೀನಿಯದಲ್ಲಿ 61,240 ಕಿಮೀ ಉದ್ದದ ರಸ್ತೆ ಮಾರ್ಗವಿದೆ (1999). 4,185ಕಿಮೀ ಉದ್ದದ ರೈಲು ಮಾರ್ಗವಿದೆ (1999). 41 ಸಾರ್ವಜನಿಕ ವಿಮಾನ ನಿಲ್ದಾಣಗಳಿವೆ. ನದಿ ಸಾರಿಗೆಯೂ ಪ್ರಾಮುಖ್ಯ ಪಡೆದಿದೆ.

	ಈ ರಾಜ್ಯದಲ್ಲಿ 56 ರಾಜ್ಯಬ್ಯಾಂಕುಗಳು ಮತ್ತು 26 ರಾಷ್ಟ್ರೀಯ ಬ್ಯಾಂಕುಗಳಿವೆ. 

	ಈ ರಾಜ್ಯದ ಪ್ರಮುಖ ರಫ್ತು ಮಾರುಕಟ್ಟೆಗಳೆಂದರೆ ಯುರೋಪ್ ರಾಷ್ಟ್ರಗಳು, ಕೆನಡ, ಜಪಾನ್, ತೈವಾನ್ ಮತ್ತು ಜರ್ಮನಿ.

	ಸಂವಿಧಾನ ಮತ್ತು ಸರ್ಕಾರ: ವೆಸ್ಟ್ ವರ್ಜೀನಿಯದಲ್ಲಿ 1872ರಲ್ಲಿ ಅಳವಡಿಸಲಾದ ಸಂವಿಧಾನ ವ್ಯವಸ್ಥೆ ಇಂದೂ ಇರುವುದು. ಆದರೆ ಇದು 70 ಬಾರಿ ತಿದ್ದುಪಡಿಗೆ ಒಳಪಟ್ಟಿದೆ. ವಿಧಾನಸಭೆಗೆ 34 ಸದಸ್ಯರನ್ನು 4 ವರ್ಷಗಳಿಗೊಮ್ಮೆ ಆಯ್ಕೆ ಮಾಡಲಾಗುತ್ತದೆ. ಅರ್ಧದಷ್ಟು ಸದಸ್ಯರು ಎರಡು ವರ್ಷಕ್ಕೊಮ್ಮೆ ಆಯ್ಕೆಯಾಗುತ್ತಾರೆ. ಸರ್ಕಾರವು 4 ವರ್ಷಗಳಿಗೊಮ್ಮೆ ತನ್ನ ಪೂರ್ಣ ಅಧಿಕಾರವನ್ನು ನಿರ್ವಹಿಸುತ್ತದೆ. ರಾಜ್ಯಗಳು 3 ಜನ ಪ್ರತಿನಿಧಿಗಳನ್ನು ಮೇಲ್ಮನೆಗೆ ಪ್ರತಿನಿಧಿಯಾಗಿ ಕಳುಹಿಸುತ್ತವೆ. ಈ ರಾಜ್ಯದಲ್ಲಿ 55 ಪ್ರಾದೇಶಿಕ ಆಡಳಿತ ವಿಭಾಗಗಳಿವೆ. ಸುಪ್ರೀಂಕೋರ್ಟ್ ಪ್ರಧಾನ ನ್ಯಾಯಸ್ಥಾನವಾಗಿರುವುದು. ಪ್ರತಿ ಸ್ಥಳೀಯ ಪ್ರದೇಶಗಳಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿವೆ. ಸುಪ್ರೀಂಕೋರ್ಟ್ ಎಲ್ಲ ಪ್ರಮುಖ ಅಹವಾಲುಗಳನ್ನು ತೀರ್ಮಾನಿಸುತ್ತದೆ. 5 ಜನ ನ್ಯಾಯಾಧೀಶರನ್ನು 12ವರ್ಷ ಅವಧಿಗೆ ಆಯ್ಕೆ ಮಾಡಲಾಗುವುದು. ವರ್ಗಾವಣೆಯ ನ್ಯಾಯಾಲಯಗಳಲ್ಲಿ 1-7 ಜನ ನ್ಯಾಯಾಧೀಶರಿರುವರು. ಇವರು 8 ವರ್ಷ ಅವಧಿಗೆ ಆಯ್ಕೆಯಾಗುತ್ತಾರೆ.

	ಶಿಕ್ಷಣ: 5 ವರ್ಷದಿಂದ 21 ವರ್ಷದವರೆಗಿನ ವಿದ್ಯಾರ್ಥಿಗಳಿಗೆ ಎಲ್ಲ ಸಾರ್ವಜನಿಕ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. 7 ಮತ್ತು 16 ವರ್ಷದ ನಡುವೆ ಇರುವ ಎಲ್ಲ ಮಕ್ಕಳಿಗೆ ಕಡ್ಡಾಯ ಹಾಜರಾತಿ ನಿಯಮ ಜಾರಿಯಲ್ಲಿದೆ. ಶಾಲೆಗಳ ತರಗತಿಯ ಅವಧಿ ವಾರ್ಷಿಕವಾಗಿ 200ದಿನಗಳು. 180-185 ದಿನಗಳಲ್ಲಿ ಪಾಠ ನಡೆಯುವುದು. ಈ ರಾಜ್ಯದಲ್ಲಿ ಪದವಿಗಳನ್ನು ನೀಡುವ ಸುಮಾರು 19 ಉನ್ನತ ಶಿಕ್ಷಣ ಸಂಸ್ಥೆಗಳೂ ವಿಶ್ವವಿದ್ಯಾಲಯಗಳೂ ಇವೆ.

	1999-2000ವರ್ಷದಲ್ಲಿ 176 ಸಾರ್ವಜನಿಕ ಗ್ರಂಥಾಲಯಗಳಿದ್ದವು. ಇವುಗಳಲ್ಲಿ 28 ಕಾಲೇಜು ಮತ್ತು ವಿಶ್ವವಿದ್ಯಾಲಯದ ಗ್ರಂಥಾಲಯಗಳಾಗಿವೆ. 44 ವಿಶೇಷ ಗ್ರಂಥಾಲಯಗಳು. ಸಂಚಾರಿ ಗ್ರಂಥಾಲಯ ವ್ಯವಸ್ಥೆಯೂ ಇದೆ.

	ಪ್ರಮುಖ ಕಲಾ ವಸ್ತು ಸಂಗ್ರಹಾಲಯ ಮತ್ತು ಚಿತ್ರಕಲಾ ಶಾಲೆಯು ಹಂಟಿಂಗ್‍ಟನ್ ಕಲಾ ವಸ್ತುಸಂಗ್ರಹಾಲಯದಲ್ಲಿದೆ. ಐತಿಹಾಸಿಕ ವಸ್ತು ಸಂಗ್ರಹಾಲಯ ರಾಜಧಾನಿ ಚಾರ್ಲ್‍ಸ್ಟನ್‍ನಲ್ಲಿದೆ. ಹಾರ್ಪರ್ ಫೆರ್ರಿ ರಾಷ್ಟ್ರೀಯ ಐತಿಹಾಸಿಕ ಉದ್ಯಾನವನ ಹಾರ್ಪರ್ ಫೆರ್ರಿಯಲ್ಲಿದೆ.

	ಹಬ್ಬಗಳು: ವೆಸ್ಟ್ ವರ್ಜೀನಿಯ ರಾಜ್ಯದಲ್ಲಿ 100ಕ್ಕೂ ಹೆಚ್ಚು ಹಬ್ಬ ಮತ್ತು ಜಾತ್ರೆಗಳನ್ನು ಆಚರಿಸಲಾಗುತ್ತದೆ. ಇಲ್ಲಿ ದೊಡ್ಡದಾದ ಕಲೆ ಮತ್ತು ಕರಕುಶಲ ವಸ್ತುಗಳ ಮೇಳಗಳು ನಡೆಯುತ್ತವೆ. ಈ ರಾಜ್ಯ ಪರ್ವತಗಳಿಂದ ಕೂಡಿರುವುದರಿಂದ ಪರ್ವತ ಅರಣ್ಯ ಹಬ್ಬ ನಡೆಯುವುದು. ಇದರ ಜೊತೆಯಲ್ಲಿ ಜನಪದ ಹಬ್ಬ ನಡೆಯುತ್ತದೆ.  			

	(ಬಿ.ಡಿ.ಟಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ